ಬೆಲಿ, ಆಂದ್ರಿ
1880-1934. ರಷ್ಯಾದ ಪ್ರತಿಭಾವಂತ ಕವಿ; ವಿಮರ್ಶಕ ಮತ್ತು ಕಾದಂಬರಿಕಾರ. ನಿಜನಾಮ ಬೂಗ್ಯಾಯೆಫ್, ಬೊರಿಸ್ ನಿಕೊಲ್ಯೇವಿಚ್. ಪ್ರತೀಕ ಮಾರ್ಗದ ಕವಿಗಳಲ್ಲಿ ತನ್ನತನ, ಪ್ರಭಾವಗಳ ದೃಷ್ಟಿಯಿಂದ ಅಸಮಾನನಾದವ. ಪ್ರತೀಕಗಳನ್ನು ಕಾಣುವ ದೃಷ್ಟಿ ವಾಸ್ತವಿಕತೆಗಳ ಅಪೂರ್ವ ಮಿಳನವನ್ನೂ ಪ್ರತೀಕ ಮಾರ್ಗದ ಬರಹಗಾರರಲ್ಲಿ ಕಾಣದ ಹಾಸ್ಯದ ಎಳೆಯನ್ನೂ ಇವನ ಸಾಹಿತ್ಯದಲ್ಲಿ ಕಾಣಬಹುದು. ಪದ್ಯ ಗದ್ಯಗಳಲ್ಲಿ ಈತ ಪ್ರಯೋಗಕಾರ. ಈತನ ಗದ್ಯ ಆಲಂಕಾರಿಕ ಗದ್ಯ-ಪ್ರತಿಪದದ ನಾದ ಮತ್ತು ಶೈಲಿಯ ಲಯ ಗಮನವನ್ನು ಸೆಳೆಯುತ್ತವೆ. ಕದನ ಸಂಫೋನಿಸ್‍ನ ನಾಲ್ಕು ಸಂಪುಟಗಳಲ್ಲಿ (1901-08) ಅಡಕವಾಗಿವೆ. ಸಿಲ್ವರ್ ಡವ್ (1910); ಪೀಟರ್ಸ್ ಬರ್ಗ್ (1912) ಮುಂತಾದ ಕಾದಂಬರಿಗಳಲ್ಲಿ ಶೈಲಿಯಲ್ಲದೆ ಸೊಗಸಾಗಿ ಪಾತ್ರನಿರೂಪಣೆ, ನಿಸರ್ಗದ ಚಿತ್ರಗಳಿವೆ. 

	ಕೊತಿಕ್ ಲಟ್‍ಯೇವ್ (1920) ವಿಶಿಷ್ಟ ಕೃತಿ. ಇದು ಇವನ ಬಾಲ್ಯದ ನೆನಪುಗಳು. ವಸ್ಪಮಿನಾನೀಯೆ ಆ ಬ್ಲಾಕೆ (ಅಲೆಕ್ಸಾಂಡರ್ ಬ್ಲಾಕ್‍ನ ಸ್ಮøತಿಗಳು-1922) ರಷ್ಯದ ಪ್ರತೀಕಮಾರ್ಗದ ಚರಿತ್ರೆಯನ್ನೇ ಸಂಗ್ರಹವಾಗಿ ನೀಡುತ್ತದೆ. 1917ರ ಅಕ್ಟೋಬರ್ ಕ್ರಾಂತಿಯನ್ನು ಜಗತ್ತಿನ ಉದ್ಧಾರದ ಮಾರ್ಗ ಎಂದು ಸ್ವಾಗತಿಸಿದ. 			
    (ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ